ಪಶ್ಚಿಮ ಆಸ್ಟ್ರೇಲಿಯ -
ಆಸ್ಟ್ರೇಲಿಯ ಸಮಧಿರಾಜ್ಯದಲ್ಲಿ (ಕಾಮನ್‍ವೆಲ್ತ್) ಒಂದು ಗೂಡಿರುವ ರಾಜ್ಯಗಳಲ್ಲಿ ಅತ್ಯಂತ ದೊಡ್ಡದು. ಆಸ್ಟ್ರೇಲಿಯದ ಮೂರನೆಯ ಒಂದರಷ್ಟಿರುವ ಈ ರಾಜ್ಯ. ಫೂ.ರೇ. 1290 ಗೆ ಪಶ್ಚಿಮಕ್ಕಿರುವ ಖಂಡ ಪ್ರದೇಶವನ್ನೆಲ್ಲ ಆವರಿಸಿದ. ವಿಸ್ತೀರ್ಣ 25,27,621 ಚ.ಕಿಮೀ. ಜನಸಂಖ್ಯೆ 10,45,800 (1971). ರಾಜ್ಯದ ಪೂರ್ವದಲ್ಲಿ ಉತ್ತರ ಪ್ರದೇಶ (ನಾರ್ದರ್ನ್ ಟೆರಿಟೊರಿ) ಮತ್ತು ದಕ್ಷಿಣ ಆಸ್ಟ್ರೇಲಿಯ ಇವೆ. ರಾಜಧಾನಿ ಪರ್ತ್.

ಮೇಲ್ಮೈ ಲಕ್ಷಣ : ಪಶ್ಚಿಮ ಆಸ್ಟ್ರೇಲಿಯದ ಹೆಚ್ಚು ಭಾಗ ದಿ ಗ್ರೇಟ್ ವೆಸ್ಟರ್ನ್ ಪ್ಲೇಟೋ ಎಂದು ಕರೆಯಲಾದ ತಗ್ಗಾದ ಪ್ರಸ್ಥಭೂಮಿ. ಮರಳು ತುಂಬಿದ ದಕ್ಷಿಣ ಹಾಗೂ ಪಶ್ಚಿಮ ತೀರಪ್ರದೇಶಗಳು ಹೆಚ್ಚು ಕಡಿಮೆ ಚಪ್ಪಟೆಯಾಗಿವೆ. ಇವುಗಳಲ್ಲಿ ನೈಸರ್ಗಿಕ ಬಂದರುಗಳೂ ಒಳಚಾಚುಗಳು ಬಲು ವಿರಳ. ಕರಾವಳಿಯ ಉದ್ದ 6,960 ಚ.ಕಿ.ಮೀ ನೈಋತ್ಯದಲ್ಲಿರುವ ಆಲ್ಬನಿ ಉತ್ತಮ ಬಂದರು. ಕಿಂಬರ್ಲಿ ವಿಭಾಗದಲ್ಲಿ ಹಬ್ಬಿರುವ ಮುಖ್ಯ ಪರ್ವತಶ್ರೇಣಿಯಾದ ಕಿಂಗ್ ಲಿಯೋಪೋಲ್ಡಿನ ಅತ್ಯುನ್ನತ ಶಿಖರ ಬ್ರೂಮ್ (927 ಮೀ) ವಾಯವ್ಯದಲ್ಲಿ ಫಾರ್ಟೆಸ್ಕ್ಯೂ ಮತ್ತು ಆಷ್ಟರ್ಟನ್ ನದಿಗಳ ನಡವೆ ಪಶ್ಚಿಮ ಆಸ್ಟ್ರೇಲಿಯದ ಅತ್ಯುನ್ನತ ಪರ್ವತಶ್ರೇಣಿಯಾದ ಹ್ಯಾಮಸ್ರ್ಲಿ ಇದೆ. ರಾಜ್ಯದ ಅತ್ಯುನ್ನತ ಶಿಖರವಾದ ಬ್ರೂಸ್ (1.227 ಮೀ) ಈ ಶ್ರೇಣಿಯಲ್ಲಿದೆ. ನೈಋತ್ಯದಲ್ಲಿ ಹಬ್ಬಿರುವ ಡಾರ್ಲಿಂಗ್ ಶ್ರೇಣಿಯ ಅತ್ಯುನ್ನತ ಶಿಖರ ಕುಕ್ (582 ಮೀ). ದಕ್ಷಿಣದಲ್ಲಿರುವ ಸ್ಟರ್ಲಿಂಗ್ ಶ್ರೇಣಿಯ ಅತ್ಯುನ್ನತ ಶಿಖರ ಬ್ಲಫ್ ನಾಲ್ (1,109 ಮೀ.). ಅದಕ್ಕೂ ಕರಾವಳಿಗೂ ನಡುವೆ ತಗ್ಗಾದ ಪೊರಾನ್ ಗೊರಪ್ ಶ್ರೇಣಿಯಿದೆ. ಪಶ್ಚಿಮ ಆಸ್ಟ್ರೇಲಿಯದಲ್ಲಿ ಇಡೀ ವರ್ಷ ಹರಿಯುವ ದೊಡ್ಡ ನದಿಗಳು ವಿರಳ, ಮಳೆ ಬಿದ್ದಾಗ ತುಂಬಿ ಹರಿಯುವ, ಮತ್ತು ಒಣ ಋತುವಿನಲ್ಲಿ ಸಣ್ಣ ಸಣ್ಣ ಮಡುಗಳ ಸಾಲುಗಳಂತೆ ಕಾಣುವ ನದಿಗಳೇ ಹೆಚ್ಚು. ಓರ್ಡ್ ಮತ್ತು ಅದರ ಉಪನದಿಗಳಾದ ಡೆನ್‍ಹ್ಯಾಮ್ ಬೋ, ನೆಗ್ರಿ ಹಾಗೂ ಪಾಂಟನ್ ; ಪೆಂಟೆಕಾಸ್ಟ್ ಮತ್ತು ಅದರ ಉಪನದಿ ಚೇಂಬರ್ಲೇನ್ ; ಡ್ಯುರತ್, ಡ್ರಿಸ್ಡೇಲ್, ಕಿಂಗ್ ಎಡ್ವರ್ಡ್, ಪ್ರಿನ್ಸ್ ರೀಜೆಂಟ್, ಚಾನ್ರ್ಲಿ, ಇಸ್ಡೆಲ್ ಮತ್ತು ಫಿಟ್ಸ್‍ರಾಯ್ ಹಾಗೂ ಅದರ ಉಪನದಿಗಳಾದ ಮಾರ್ಗರೇಟ್ ಮತ್ತು ಹ್ಯಾನ್-ಇವು ಉತ್ತರದ ನದಿಗಳು. ವಾಯುವ್ಯದಲ್ಲಿ ಹರಿಯುವ ನದಿಗಳು ಡೆ ಗ್ರೇ ಮತ್ತು ಅದರ ಉಪನದಿಗಳಾದ ಒಕೋವರ್ ಹಾಗೂ ಷಾ ಯೂಲ್, ಫಾರ್ಟೆಸ್ಕ್ಯೂ ಮತ್ತು ಆಷ್ಬರ್ಟನ್ ಹಾಗೂ ಅದರ ಉಪನದಿಗಳಾದ ಹೆನ್ರಿ ಮತ್ತು ಹಾರ್ಡಿ. ಈ ನದಿಗಳು ಅನಿಶ್ಚಿತವಾಗಿ ಹರಿಯುವವಾಗಿದ್ದು. ಅನೇಕ ವರ್ಷಗಳ ವರೆಗೆ ಬತ್ತಿ ಹೋಗುವುದುಂಟು. ಮಿನಿ ಲ್ಯಾ, ಗ್ಯಾಸ್ಕಯ್ನ್ ಮತ್ತು ಅದರ ಉಪನದಿ ಲಿಯಾನ್ಸ್ ; ವೂರಾಮೆಲ್, ಮರ್ಚಿಸನ್ ಗ್ರೀನಫ್, ಸ್ವಾನ್, ಮರ್ರೇ ಮತ್ತು ಕಾಲೀ-ಇವು ಪಶ್ಚಿಮಕ್ಕೆ ಹರಿಯುವ ನದಿಗಳು. ದಕ್ಷಿಣಕ್ಕೆ ಹರಿಯುವ ನದಿಗಳೆಂದರೆ ಬ್ಲ್ಯಾಕ್‍ವುಡ್, ಡೊನೆಲ್ಲಿ, ವಾರನ್, ಡೀಪ್, ಫ್ರ್ಯಾಂಕ್ ಲ್ಯಾಂಡ್ ಡೆನ್ಮಾರ್ಕ್, ಹೇ, ಕಾಲ್ಗರ್, ಪಾಲೆನಪ್, ಗೈಡ್ರ್ನರ್, ಫಿಟ್‍ಜóರಾಲ್ಡ್ ಮತ್ತು ಫಿಲಿಪ್ಸ್. ಪಶ್ಚಿಮ ಆಸ್ಟ್ರೇಲಿಯದಲ್ಲಿ ದೊಡ್ಡ ಸರೋವರಗಳು ಕಡಿಮೆ. ಡಾರ್ಲಿಂಗ್ ಶ್ರೇಣಿ ಮತ್ತು ತೀರಗಳ ನಡುವೆ ಉಪ್ಪುನೀರಿನ ಕೆಲವು ಹರವುಗಳು ಮತ್ತು ಸಿಹಿ ನೀರಿನ ಅನೇಕ ಸರೋವರಗಳು ಇರುವುದಾದರೂ ಅವು ಬೇಸಗೆಯಲ್ಲಿ ಬದಿಯಿಂದ ತುಂಬಿರುತ್ತವೆ. ಒಳನಾಡಿನಲ್ಲಿರುವ ಹೆಚ್ಚು ವಿಸ್ತಾರವಾದ ಸರೋವರಗಳು ಹೆಚ್ಚು ಮಳೆಯಾದಾಗ ಮಾತ್ರ ನೀರಿನಿಂದ ತುಂಬಿರುತ್ತವೆ; ಉಳಿದ ಕಾಲದಲ್ಲಿ ದೊಡ್ಡ ಜವುಗುಗಳಾಗಿರುತ್ತವೆ.

ವಾಯುಗುಣ :  ಪಶ್ಚಿಮ ಆಸ್ಟ್ರೇಲಿಯದ್ದು ಸಮಶೀತೋಷ್ಣವಾಯುಗುಣ. ಚಳಿಗಾಲದಲ್ಲಿ ಸಾಗರಿಕ ; ಬೇಸಗೆಯಲ್ಲಿ ಉಷ್ಣತೆ ಮಿತವಾಗಿರುತ್ತದೆ. ಒಳನಾಡಿನಲ್ಲಿ ಶುಷ್ಕ ವಾಯುಗುಣ ಇರುತ್ತದೆ. ಶೇಕಡ 58 ರಷ್ಟು ಪ್ರದೇಶದಲ್ಲಿ, ಅಂದರೆ ಮಧ್ಯದ ಒಳನಾಡಿನಲ್ಲಿ, 254 ಮಿಮೀ. ಗಿಂತ ಕಡಿಮೆ ಮಳೆಯಾಗುತ್ತದೆ. 762 ಮಿಮೀ. ಅಥವಾ ಅದಕ್ಕೆ ಹೆಚ್ಚಿನ ಮಳೆಯ ಭರವಸೆ ಇರುವ ಪ್ರದೇಶ ಸೇಕಡ 5.4ರಷ್ಟು ಮಾತ್ರ. ಅದು ಹೆಚ್ಚಾಗಿ ನೈಋತ್ಯದಲ್ಲಿದೆ.

ಸಸ್ಯಪ್ರಾಣಿವರ್ಗ : ಇಲ್ಲಿ 6,800 ಬಗೆಯ ಸಸ್ಯಗಳಿವೆ. ಅವುಗಳಲ್ಲಿ ಕೀಟಾಹಾರಿ ಪಿಚರ್, ಕಾಂಗರೂ ಹುಲ್ಲು, ಫೆದರ್‍ಫ್ಲವರ್ ಮತ್ತು ಕ್ರಿಸಮಸ್ ಮರ ವಿಶಿಷ್ಟವಾದವು. ಉತ್ತರಭಾಗದಲ್ಲಿ ಮಾನ್‍ಸೂನ್ ಕಾಡುಗಳಿವೆ. ಕಿಂಬರ್ಲಿ ಪ್ರದೇಶದಲ್ಲಿ ಹುಲ್ಲು ಸಮೃದ್ಧವಾಗಿ ಬೆಳೆಯುತ್ತದೆ. ಫಿಟ್ಸ್‍ರಾಯ್‍ನದಿಯ ದಕ್ಷಿಣದಲ್ಲಿ ಎತ್ತರವಾದ ಹುಲ್ಲುಗಾವಲಿದೆ. ನೈಋತ್ಯದಲ್ಲಿ ಹುಲ್ಲುಗಾವಲು ಕಡಿಮೆಯಿದ್ದು ಮರ ಮತ್ತು ಗುಲ್ಮಗಳು ಹೆಚ್ಚಾಗಿವೆ. ಅಲ್ಲಿಯ ಸಸ್ಯವರ್ಗ ಹೆಚ್ಚು ವೈವಿಧ್ಯಮಯ. ಹೂ ಬಿಡುವ ಗಿಡಗಳೂ ಹೆಚ್ಚಾಗಿವೆ. ರಾಜ್ಯದ ಅಧಿಕ ಭಾಗವನ್ನು ಮರುಭೂಮಿ ಆವರಿಸಿದೆ. ಕಾಡು ಮುಖ್ಯವಾಗಿರುವುದು ನ್ಯೆಋತ್ಯ ಭಾಗದಲ್ಲಿ. ಮರಳುಮಯವಾದ ಕರಾವಳಿ ಬಯಲಿನಲ್ಲೂ ನೈಋತ್ಯದ ಒಳನಾಡಿನಲ್ಲೂ ನೀಲಗಿರಿ ಮರಗಳು ಬೆಳೆಯುತ್ತವೆ.
ಗೆಜ್ಜಲು ಇರುವಲ್ಲಿ ಬಿಲದಲ್ಲಿ ವಾಸಮಾಡುವ ಕಪ್ಪೆ, ಇರುವೆಗಳನ್ನು ತಿನ್ನುವ ನುಂಬ್ಯಾಟ್ ಇಲ್ಲಿಯ ಪ್ರಾಣಿವೈಶಿಷ್ಟ್ಯಗಳು. ವಿಕಾರರೂಪದ ಒಂದು ಬಗೆಯ ಹಲ್ಲಿಯೂ ಇದೆ.

ಜನಜೀವನ : ವಿಸ್ತೀರ್ಣದಲ್ಲಿ ಈ ರಾಜ್ಯ ಆಸ್ಟ್ರೇಲಿಯದ ಮೂರನೆಯ ಒಂದರಷ್ಟಿರುವುದಾದರೂ ಜನಸಂಖ್ಯೆ ಅದರ ಸೇಕಡ ಎಂಟರಷ್ಟಿದೆ. ರಾಜ್ಯದ ಜನ ಸಂಖ್ಯೆಯಲ್ಲಿ 18,000 ಕ್ಕೂ ಹೆಚ್ಚು ಮಂದಿ ಮೂಲನಿವಾಸಿಗಳು. ಜನಸಂಖ್ಯೆಯ ಮೂರನೆಯ ಒಂದರಷ್ಟು ಮಂದಿ 15ಕ್ಕಿಂತ ಕಡಿಮೆ ವಯಸ್ಸಿನವರು. ಜನಸಂಖ್ಯೆ ಗಮನಾರ್ಹವಾಗಿ ಏರುತ್ತಿರುವುದು ಹಿತಕರವಾದ ವಾಯುಗುಣ ಇರುವ ನೈಋತ್ಯದ ಮೂಲೆಯಲ್ಲಿ. ಒಳನಾಡಿನ ಹೆಚ್ಚು ಪ್ರದೇಶದಲ್ಲಿ ಜನವಸತಿ ವಿರಳ. ಅಲ್ಲಿ ಹೆಚ್ಚಾಗಿ ಬಿಳಿಯ ಐರೋಪ್ಯರು ವಾಸಿಸುತ್ತಾರೆ. 10,000ಕ್ಕೂ ಹೆಚ್ಚು ಜನವಸತಿಯಿರುವ ಸ್ಥಳಗಳು ಪರ್ತ್ (7,01,392) (1971), ಕಾಲ್ಗೂರ್ಲಿ (21,000). ಬನ್‍ಬರಿ (18,000) ಜೆರಾಲ್ಡ್‍ಟನ್ (15,000) ಹಾಗೂ ಆಲ್ಬನಿ (13,000) ರಾಜ್ಯಕ್ಕೆ ವಲಸೆ ಬಂದವರಲ್ಲಿ ಅಧಿಕ ಸಂಖ್ಯೆಯವರು ಆಸ್ಟ್ರೇಲಿಯದ ಇತರ ರಾಜ್ಯಗಳವರು. ಜನ ಸಂಖ್ಯೆಯಲ್ಲಿ ಮೂರನೆಯ ಎರಡರಷ್ಟು ಜನರು ಆಸ್ಟ್ರೇಲಿಯದಲ್ಲೇ ಜನಿಸಿದವರು. ಸಮುದ್ರದಾಚೆಯಿಂದ ಬಂದ ವಲಸೆಗಾರರಲ್ಲಿ ಬ್ರಿಟಿಷ್ ಮೂಲದವರ ಸಂಖ್ಯೆ ಹೆಚ್ಚು. 
ರಾಜ್ಯದ ಕ್ರೈಸ್ತರಲ್ಲಿ ಸುಮಾರು 3,00,000 ಜನರು ಇಂಗ್ಲೆಂಡ್ ಚರ್ಚಿಗೆ ಸೇರಿದವರು; ರೋಮನ್ ಕ್ಯಾತೊಲಿಕರು 2,00,000 ಮಂದಿ ಉಳಿದವರಲ್ಲಿ ಮೆತಾಡಿಸ್ಟರೂ ಪ್ರೆಸ್ಬಟೇರಿಯನರೂ ಇದ್ದಾರೆ.

ಖನಿಜ ಸಂಪತ್ತು : ರಾಜ್ಯದಲ್ಲಿ ಅನೇಕ ಖನಿಜಗಳು ದೊರೆಯುತ್ತವೆ. ಬಹುಕಾಲದಿಂದ ಜೆರಾಲ್ಡ್‍ಟನ್ನಿನ ಹತ್ತಿರ ಸೀಸ, ತಾಮ್ರಗಳ ಗಣಿಗಾರಿಕೆ ನಡೆಯುತ್ತಿದೆ. ಮಾರ್ಗನ್ ಶಿಖರ, ಫಿಲಿಪ್ಸ್ ನದಿ ಮತ್ತು ಪಶ್ಚಿಮ ವೆಲ್ಬಾರಾ ಪ್ರದೇಶಗಳಲ್ಲೂ ತಾಮ್ರನಿಕ್ಷೇಪಗಳಿವೆ. ಕೂಲ್ಗಾರ್ಡಿ ಮತ್ತು ಕಾಲ್ಗೂರ್ಲಿಯಲ್ಲಿ ಚಿನ್ನದ ಗಣಿಗಳಿವೆ. ಆಸ್ಟ್ರೇಲಿಯದ ಚಿನ್ನದ ಉತ್ಪಾದನೆಯ ಸೇಕಡ 73 ರಷ್ಟು ಬರುವುದು ಈ ರಾಜ್ಯದ ಗಣಿಗಳಿಂದ. ಬ್ಲ್ಯಾಕ್‍ವುಡ್ ನದಿಯ ಮೇಲೆ ಗ್ರೀನ್ ಬುಷಸ್‍ನಲ್ಲಿ ಮತ್ತು ಮೊರ್ಬಲ್ ಬಾರ್‍ನಲ್ಲಿ ತವರ ದೊರೆಯುತ್ತದೆ. ವಾಯುವ್ಯದ ಆರ್ಷ್‍ಬರ್ಟನ್ ಹಾಗೂ ಪಿಲ್ಬಾರಾ ಪ್ರದೇಶಗಳಲ್ಲಿ ಕಬ್ಬಿಣ ಅದುರಿನ ನಿಕ್ಷೇಪಗಳಿವೆ. ಪರ್ತ್‍ನ ಸುತ್ತಮುತ್ತಲಿನ ಗುಡ್ಡಗಳಲ್ಲಿ ಬಾಕ್ಸೈಟ್ ನಿಕ್ಷೇಪ ಪತ್ತೆಯಾಗಿದೆ. ಕಾಲ್ಗೂರ್ಲಿಯ ಬಳಿ ನಿಕಲ್ ದೊರೆಯುತ್ತದೆ. 1967ರಲ್ಲಿ ಆನ್‍ಸ್ಲೋದ ಹತ್ತಿರ ಬ್ಯಾರೋ ದ್ವೀಪದಲ್ಲಿ ಆಸ್ಟ್ರೇಲಿಯದ ಅತ್ಯಂತ ದೊಡ್ಡ ಎಣ್ಣೆ ಗಣಿಯ ಕೆಲಸ ಪ್ರಾರಂಭವಾಯಿತು. ಜೆರಾಲ್ಡ್‍ಟನ್ನಿನ ಹತ್ತಿರ ಯಾರ್ಡಾರಿನೋದಲ್ಲಿ ನೈಸರ್ಗಿಕ ಅನಿಲದ ಪತ್ತೆಯಾಗಿದೆ. ಈ ರಾಜ್ಯದಲ್ಲಿ ದೊರೆಯುವ ಇತರ ಖನಿಜಗಳು ಮ್ಯಾಂಗನೀಸ್, ಇಲ್ಮೆನೈಟ್, ಮೊನೋಸೈಟ್, ರುಟೈಲ್, ಲ್ಯೂಕೋಕ್ಸಿನ್ ಜûರ್ಕಾನ್.

ಕೈಗಾರಿಕೆ : ಕೈಗಾರಿಕೆ ಮುಖ್ಯವಾಗಿ ಪರ್ತ್ ನಗರದ ಪ್ರದೇಶಕ್ಕೆ ಸೀಮಿತವಾಗಿದೆ. ಮರ ಕೊಯ್ಯುವುದು ಹಂದಿಯ ಮಾಂಸವನ್ನು ಕೆಡದಂತಿಡುವುದು. ಹೈನದ ಪದಾರ್ಥಗಳ ಸಂಸ್ಕರಣ, ಸೂಪರ್ ಫಾಸ್ಫೇಟ್‍ಗಳ ತಯಾರಿಕೆ, ರೈಲ್ವೆ ಎಂಜಿನಿಯರಿಂಗ್ ಮೊದಲಾದವಕ್ಕೆ ಸಂಬಂಧಿಸಿದ ಕೈಕಾರಿಕೆಗಳೇ 1950ರ ದಶಕದ ಮಧ್ಯದವರೆಗೂ ಪ್ರಧಾನವಾಗಿದ್ದುವು. ಈಚೆಗೆ ಪರ್ತ್-ಫ್ರೀಮ್ಯಾಂಟ್‍ಲ್-ಕಾಕ್ ಬರ್ನ್ ಸೌಂಡ್ (ಕ್ವಿನಾನಾ) ಪ್ರದೇಶದಲ್ಲಿ ದೊಡ್ಡ ತೈಲ ಶುದ್ಧೀಕರಣ ಮತ್ತು ಉಕ್ಕಿನ ರೋಲಿಂಗ್ ಕಾರ್ಖಾನೆಗಳು ಕೆಲಸವಾರಂಭಿಸಿದಂದಿನಿಂದ ಸುತ್ತ ಮುತ್ತು ಅವಕ್ಕೆ ಸಂಭಂದಿಸಿದ ಕೈಗಾರಿಕೆಗಳ ಸಂಕೀರ್ಣ ಬೆಳೆದಿದೆ.

ಕೃಷಿ : ಕೃಷಿಕೂಲಿ ವಿರಳವೂ ಹೆಚ್ಚು ವೆಚ್ಚದ್ದು ಆಗಿರುವುದರಿಂದ ವ್ಯವಸಾಯವನ್ನು ಪೂರ್ಣವಾಗಿ ಯಾಂತ್ರೀಕರಿಸಲಾಗಿದೆ. ಸುಮಾರು 70,00,000 ಎಕರೆ ಪ್ರದೇಶದಲ್ಲಿ ಗೋದಿಯನ್ನು ಬೆಳೆಯಲಾಗುತ್ತದೆ. 
ಕಬ್ಬು, ಕುಸುಂಬೆ, ಬತ್ತ ಮುಖ್ಯ ವಾಣಿಜ್ಯ ಬೆಳೆಗಳು, ಉತ್ತರದಲ್ಲಿ ದನಕರುಗಳನ್ನು ಸಾಕುತ್ತಾರೆ. ಪೂರ್ವ ಕಿಂಬರ್ಲಿ ಪ್ರದೇಶದಲ್ಲಿ ಹತ್ತಿ ಬೆಳೆಯುತ್ತದೆ. ಜವೆ ಗೋದಿ, ಬಾರ್ಲಿ ಮೇವಿನ ಹುಲ್ಲು, ತಂಬಾಕು, ಆಲೂಗಡ್ಡೆ ಅಗಸೆಯ ನಾರು - ಇವು ಇತರ ವ್ಯವಸಾಯ ಬೆಳೆಗಳು. ಸುಮಾರು 34,000 ಎಕರೆ ಪ್ರದೇಶದಲ್ಲಿ ಹಣ್ಣಿನ ಮತ್ತು ದ್ರಾಕ್ಷಿಯ ತೋಟಗಳಿವೆ.
ರಾಜ್ಯದಲ್ಲಿ ಸುಮಾರು ಮೂರುವರೆ ಲಕ್ಷ ಕುರಿಗಳಿವೆ. ಅವುಗಳಲ್ಲಿ ಮೆರಿನೋ ಜಾತಿಯವೇ ಹೆಚ್ಚು ಮೌಲ್ಯದ ದೃಷ್ಟಿಯಿಂದ ಮಾಂಸದ ಪದಾರ್ಥಗಳು ಉಣ್ಣೆಯ ಅನಂತರ ಬರುತ್ತವೆ. ರಾಜ್ಯದ ಉತ್ತರಭಾಗದಲ್ಲಿ ಅವುಗಳ ಉತ್ಪಾದನೆ ಒಂದು ವಿಶೇಷ ಉದ್ಯಮ. ಹೈನಿನ ಪದಾರ್ಥಗಳನ್ನೂ ತಯಾರಿಸಲಾಗುತ್ತದೆ. ಮೊಟ್ಟೆಯನ್ನು ವಿಶೇಷವಾಗಿ ಗ್ರೇಟ್ ಬ್ರಿಟನ್ನಿಗೆ ರಫ್ತುಮಾಡಲಾಗುತ್ತಿದೆ. 

ಸಾರಿಗೆ ಸಂಪರ್ಕ : 19ನೆಯ ಶತಮಾನದ ಕೊನೆಯಲ್ಲಿ ಇಲ್ಲಿಗೆ ರೈಲಿನ ಪ್ರವೇಶವಾಯಿತು. ಖನಿಜ ಸಾಗಣೆಯ ಕೆಲವು ಮಾರ್ಗಗಳನ್ನು ಬಿಟ್ಟರೆ ಉಳಿದ  ಎಲ್ಲ ರೈಲುಮಾರ್ಗಗಳು ಸರ್ಕಾರಕ್ಕೆ ಸೇರಿದವು. ಕಾಲ್ಗೂರ್ಲಿಯನ್ನು ಸಿಡ್ನಿ, ಬ್ರಿಸ್ಬೇನ್ ಮೊದಲಾದ ಪೂರ್ವದ ರಾಜಧಾನಿಗಳೊಂದಿಗೆ ಜೋಡಿಸುವ ಖಂಡಾಂತರ ರೈಲು ಮಾರ್ಗವನ್ನು ಬಿಟ್ಟರೆ ಉಳಿದವು ನ್ಯಾರೋ ಗೇಜಿನವು. ಪಶ್ಚಿಮ ಆಸ್ಟ್ರೇಲಿಯದಲ್ಲಿ ರೈಲಿನೊಡನೆ ರಸ್ತೆ ಸಾರಿಗೆ ಸ್ಪರ್ಧಿಸುತ್ತದೆ. ಉತ್ತರದ ಪ್ರದೇಶದಲ್ಲಿ ವಿಮಾನಗಳನ್ನು ಸಾರಿಗೆಗೆ ವಿಶೇಷವಾಗಿ ಬಳಸಲಾಗುತ್ತಿದೆ. ಪರ್ತಿಗೆ ಈ ಪ್ರದೇಶಗಳೊಡನೆ ಹಾಗೂ ಖನಿಜಗಳ ರಫ್ತಿನ ಬಂದರುಗಳೊಡನೆ ವಿಮಾನಸಂಪರ್ಕವಿದೆ. ವಾಯುವ್ಯದ ದೂರದ ಸ್ಥಳಗಳಲ್ಲಿನ ಜನರಿಗೆ ವ್ಯವಸ್ಥಿತವಾಗಿ ವೈದ್ಯಕೀಯ ಸಹಾಯ ಒದಗಿಸುವುದಕ್ಕಾಗಿ 1935ರಲ್ಲಿ ಪ್ರಾರಂಭವಾದ ರಾಯಲ್ ಹಾರುವ ವೈದ್ಯ ಸೇವೆಯಲ್ಲಿ ವಿಮಾನಗಳನ್ನು ಬಳಸಲಾಗುತ್ತಿದೆ. ಪರ್ತ್ ನಗರ ಅಂತರರಾಷ್ಟ್ರೀಯ ವಿಮಾನ ಪಥದಲ್ಲಿದೆ. ಫ್ರೀಮ್ಯಾಂಟಲ್ ಮುಖ್ಯ ಬಂದರು. ಸೂಯೆಜ್ó ಕಾಲುವೆ ಮತ್ತು ಗುಡ್‍ಹೋಪ್ ಭೂಶಿರಗಳ ಮಾರ್ಗವಾಗಿ ಸಂಚರಿಸುವ ಹಡಗುಗಳ ಅಲ್ಲಿಗೆ ಬರುತ್ತವೆ. ಪಶ್ಚಿಮ ಆಸ್ಟ್ರೇಲಿಯಕ್ಕೂ ಇತರ ರಾಜ್ಯಗಳಿಗೂ ನಡುವೆ ಹಡಗು ಸಂಚಾರವುಂಟು. ಮುಖ್ಯವಾಗಿ ಉತ್ತರದತ್ತ ಹೋಗುವ ಕರಾವಳಿ ನೌಕಾಮಾರ್ಗಗಳು ಜಾವಾ ಮತ್ತು ಸಿಂಗಪುರದ ವರೆಗೂ ಸಾಗುತ್ತವೆ. ಆಲ್ಬನಿ, ಬನ್‍ಬರಿ, ಜೆರಾಲ್ಡ್‍ಟನ್ ಮತ್ತು ಬ್ರೂಮ್ ಇತರ ಬಂದರುಗಳು.

ಆಡಳಿತ : 1890ರಲ್ಲಿ ಪಶ್ಚಿಮ ಆಸ್ಟ್ರೇಲಿಯಲ್ಲಿ ಜವಾಬ್ದಾರಿ ಸರ್ಕಾರ ಬಂತು. ಆಸ್ಟ್ರೇಲಿಯನ್ ಸಂಸತ್ತಿನ ಪ್ರತಿನಿಧಿ ಸಭೆಗೆ 10 ಪ್ರತಿನಿಧಿಗಳನ್ನೂ ಸೆನೇಟಿಗೆ 10 ಸದಸ್ಯರನ್ನೂ ಈ ರಾಜ್ಯ ಕಳಿಸುತ್ತದೆ. ರಾಜ್ಯದಲ್ಲಿ 50 ಸದಸ್ಯರಿರುವ ವಿಧಾನ ಸಭೆ, 30 ಸದಸ್ಯರಿರುವ ವಿಧಾನ ಪರಿಷತ್ತು ಇವೆ. ವಿಧಾನ ಸಭೆಯ ಸದಸ್ಯರು ಮೂರು ವರ್ಷಗಳ ಅವಧಿಗೂ ಪರಿಷತ್ತಿನ ಸದಸ್ಯರು ಆರು ವರ್ಷಗಳ ಅವಧಿಗೂ ಚುನಾಯಿತರಾಗುತ್ತಾರೆ. ಪರಿಷತ್ತಿನ ಮೂರನೆಯ ಒಂದರಷ್ಟು ಸಂಖ್ಯೆಯ ಸದಸ್ಯರ ಚುನಾವಣೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ರಾಜ್ಯಪಾಲ ಇಂಗ್ಲೆಂಡಿನ ರಾಜತ್ವದ ಪ್ರತಿನಿಧಿ.

ಸಮಾಜಸೇವೆ : ಮುದುಕರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಪೆನ್ಷನ್, ನಿರುದ್ಯೋಗ ಪರಿಹಾರ ಮುಂತಾದವನ್ನು ಸಾಮಾನ್ಯವಾಗಿ ಕೇಂದ್ರಸರ್ಕಾರ ಒದಗಿಸುತ್ತದೆ. ಪುರಸಭೆ, ಶಿಕ್ಷಣ, ಮಕ್ಕಳ ಕಲ್ಯಾಣ, ಸಾರ್ವಜನಿಕ ಆರೋಗ್ಯ, ಪೊಲೀಸ್, ಮಾನಸಿಕ ಆರೋಗ್ಯ, ಆದಿವಾಸಿಗಳ ಹಿತ ಮೊದಲಾದ ಸೇವೆಗಳನ್ನು ಒದಗಿಸುವ ಹೊಣೆ ರಾಜ್ಯಸರ್ಕಾರದ್ದು.

ಶಿಕ್ಷಣ : 6ರಿಂದ 15 ವರ್ಷಗಳ ವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೂಡಲಾಗುತ್ತದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ಉಚಿತ. 1911ರಲ್ಲಿ ಪಶ್ಚಿಮ ಆಸ್ಟ್ರೇಲಿಯ ವಿಶ್ವವಿದ್ಯಾಲಯ ಪರ್ತ್‍ನಲ್ಲಿ ಸ್ಥಾಪಿತವಾಯಿತು. ತಂತ್ರ ವಿಜ್ಞಾನ ಸಂಸ್ಥೆ (1967), ಐದು ತಾಂತ್ರಿಕ ಕಾಲೇಜುಗಳು ಮತ್ತು ರಾಜ್ಯಾದ್ಯಂತ ಹರಡಿರುವ ತಾಂತ್ರಿಕ ಶಾಲೆ ಹಾಗೂ ಕೇಂದ್ರಗಳು ತಾಂತ್ರಿಕ ಶಿಕ್ಷಣ ನೀಡುತ್ತವೆ. ಎರಡು ಪ್ರಾರಂಭಿಕ ಪ್ರಶಿಕ್ಷಣ ಕಾಲೇಜುಗಳು, ಒಂದು ಕೃಷಿ ಕಾಲೇಜು ಮತ್ತು ಕೆಲವು ವಸತಿ ಕೃಷಿಶಾಲೆಗಳು ಇವೆ. ಮರ್ಡಾಕ್‍ನಲ್ಲಿ ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪಿತವಾಗುತ್ತಿದೆ.

ಇತಿಹಾಸ : 1688 ರಲ್ಲಿ ವಿಲಿಯಂ ಡ್ಯಾಂಪೀರ್ ಎಂಬ ಇಂಗ್ಲೀಷ್ ಕಡಲ್ಗಳ್ಳ ಕಿಂಗ್‍ಚಾರ್ಜ್ ಸೌಂಡ್ ಎಂಬಲ್ಲಿ ಬಂದಿಳಿದು, ಪಶ್ಚಿಮ ಆಸ್ಟ್ರೇಲಿಯ ಪ್ರದೇಶವನ್ನು ಪ್ರವೇಶಿಸಿದ ಬಿಳಿಯರಲ್ಲಿ ಮೊದಲಿಗನಾದ. ಮುಂದಿನ ಒಂದು ಶತಮಾನದಲ್ಲಿ ಡಿ ಆಂತ್ರೆಕ್ಯಾಸ್ಟೋ ಮುಂತಾದ ಫ್ರೆಂಚ್ ನಾವಿಕರು ಇಲ್ಲಿಗೆ ಬಂದರು. 1791ರಲ್ಲಿ ವಾಂಕೂವರ್ ಎಂಬಾತ ಕಿಂಗ್ ಚಾರ್ಜ್ ಸೌಂಡ್‍ನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ. 1801ರಲ್ಲಿ ಮ್ಯಾತ್ಯೂ ಫ್ಲಿಂಡರ್ಸ್ ದಕ್ಷಿಣ ತೀರವನ್ನು ಸುತ್ತಿ ನೋಡಿದ. 1818ರಲ್ಲಿ ಮತ್ತು 1822ರ ನಡುವೆ ಫಿಲಿಪ್ ಪಾರ್ಕರ್ ಕಿಂಗ್ ಉತ್ತರ ತೀರದ ನಕ್ಷೆ ತಯಾರಿಸಿದ. 1826ರಲ್ಲಿ ನ್ಯೂಸೌತ್ ವೇಲ್ಸ್‍ನ ಸರ್ಕಾರ ಕೆಲವು ಕೈದಿಗಳನ್ನು ಒಂದು ಸೇನಾವಿಭಾಗವನ್ನೂ ಕಿಂಗ್ ಜಾರ್ಜ್ ಸೌಂಡಿಗೆ ಕಳುಹಿಸಿ ಫ್ರೆಡರಿಕ್ಸ್ ಟೌನ್ ವಲಸೆಯನ್ನು ಸ್ಥಾಪಿಸಿತು. ಕ್ಯಾಪ್ಟನ್ ಜೇಮ್ಸ್ ಸ್ಟರ್ಲಿಂಗ್ 1827ರಲ್ಲಿ ಸೌಂಡ್‍ನಿಂದ ಸ್ವಾನ್ ನದಿಯ ವರೆಗಿನ ಪ್ರದೇಶವನ್ನು ಪರಿಶೋಧಿಸಿದ. 1829ರಲ್ಲಿ ಕ್ಯಾಪ್ಟನ್ ಫ್ರೀಮ್ಯಾಂಟ್‍ಲ್ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಸ್ವಾನ್ ನದಿಯ ವಲಸೆಯನ್ನೂ ಪರ್ತ್ ಮತ್ತು ಫ್ರೀಮ್ಯಾಂಟ್‍ಲ್ ನಗರಗಳನ್ನೂ ಸ್ಥಾಪಿಸಿದ. ಕ್ಯಾಪ್ಟನ್ ಸ್ಟರ್ಲಿಂಗ್ ಈ ರಾಜ್ಯದ ಮೊದಲನೆಯ ಲೆಫ್ಟ್‍ನೆಂಟ್ ಗವರ್ನರ್.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ